ಗಲಾಟೆ ವಠಾರ
- vibeebekal
- May 6, 2020
- 2 min read
ಮಂಗಳೂರಿನಿಂದ ಆಗ ತಾನೇ ಬೆಂಗಳೂರಿಗೆ ವರ್ಗಾವಣೆ ಆಗಿತ್ತು. ನಮ್ಮದೊಂದು ಚಿಕ್ಕ ಸಂಸಾರ ಈ ವಠಾರದಲ್ಲಿ. ಜನ ಬೆಳಗ್ಗೆ ಎದ್ದ ತಕ್ಷಣನೇ ಯುದ್ದರಂಗಕ್ಕೆ ಸಜ್ಜಾಗುತ್ತಿದ್ದರು. ಇದೇನು ಕುರುಕ್ಷೇತ್ರವೇನು ಅಲ್ಲ ..ಆದ್ರೆ ಅದಕ್ಕೇನು ಕಮ್ಮಿ ಇರಲಿಲ್ಲ.... ಕೈಯಲ್ಲಿ ಪಾತ್ರೇಪಗಡಿ, ಚೆಂಬು, ಕೊಡಪಾನ, ಲಟ್ಟಣಿಗೆ, ಎಲ್ಲ ಹಿಡ್ಕೊಂಡು ನಿಂತುಕೊಳ್ತಿದ್ರು .ಒಬ್ಬ ಅರ್ಜುನನಂತೆ ಕಂಡ್ರೆ, ಮತ್ತೊಬ್ಬ ದುರ್ಯೋಧನ, ಮಗದೊಬ್ಬ ಭೀಮ, ಮತ್ತೆ ಇವರನ್ನು ಸಮಾಧಾನ ಮಾಡೋದು ಆ ಶಿವನೇ ...ಛೇ ಛೇ .. ಶಿವ ಶಿವ.. ಭೂಲೋಕದಲ್ಲಿದ ಕೃಷ್ಣ ಪರಮಾತ್ಮ ಅನ್ನೋ ನಮ್ಮ ಪರಮೇಶ್ ಅಂಕಲ್ ಬರಬೇಕು. ಬೆಳ್ಬೆಳ್ಳಗೆ ಜನ ಈ ರೀತಿ ರೌದ್ರಾವತ್ತರ ಮಾಡ್ತಾ ಇರೋದು ಬೇರೆ ಏನಕ್ಕೂ ಅಲ್ಲಾ ..ಕಾವೇರಿ ನೀರನ್ನು ತುಂಬೋಕೆ. ನಮ್ಮ ಬೀದಿಯಲ್ಲಿ ಯಾವಾಗ್ಲೂ ಮಂಗಳವಾರ ಕಾವೇರಿ ನೀರು ನಲ್ಲಿಯಲ್ಲಿ ಬರ್ತಿತ್ತು. ಸರಿಯಾಗಿ ಆ ನಲ್ಲಿ ನಮ್ಮ ಮನೆ ಮುಂದೇನೆ ಇತ್ತು. ಹಾಸಿಗೆಯಿಂದ ಎದ್ದು ಮನೆ ಬಾಗ್ಲು ತೆರೆದ್ರೆ ದೇವರ ಮೆರವಣಿಗೆ ಹೊರಟ ಹಾಗೆ ಜನ ಕ್ಯೂನಲ್ಲಿ. ಕೈಯಲ್ಲಿ, ತಲಿ ಮೇಲೆ, ಕಂಕುಳಲ್ಲಿ ಬಿಂದಿಗೆ.. ನೋಡಿದ್ರೇನೇ ,ಅಪ್ಪ ..ಈ ಕಾವೇರಿ ನೀರು ಬೇಡ ..ಏನು ಬೇಡ ಅನ್ನೋ ಪರಿಸ್ಥಿತಿ. "ಲೇ.. ಲೇ..ನಿಮ್ಮ್ ಅಪ್ಪನ್ ಹುಟ್ಟು ಅಡಗಿಸಿಯೇ ಬಿಡ್ತೇ ನೋಡು.. ನಿಮ್ಮಜ್ಜಿ.. " ಹೊಟ್ಟಿಗೇನು ತಿಂತಿ.." ಎಂದು ಹಲ್ಲು ಮಸೆಯುತ್ತ ಕಿರಾಣಿ. ಪಕ್ಕದ್ ಮನೆ ತಿಂಕ ಸ್ನಾನ ಮಾಡಿ ಅದೆಷ್ಟು ದಿನ ಆಯ್ತೇನೋ ..ತನ್ನ ಹೆಗಲ ಮೇಲೆ ಮಣ್ಣು ಮುಸುಕಿದ ಭೈರಾಸನ್ನು ಬೀಸುತ ಬಂದ...ಜೀವ ಗಾಳಿಗೆ ಊದಿದ್ರೆ ಹಾರುವಂತ್ತಿತ್ತು.." ಜಾಗ ಬಿಡ್ರಿ".. ಅಂದ "ಅವ್ನ .ಕಾಲಗ್ ಹೊಸಿತಿನಿ..ಎನ್ ಯಜಮಾನಿಕೆ ಮಾಡ್ತವ್ನೆ ..ಏನಂತ ತಿಳ್ಕೊಂಡಿದಿಯಪ್ಪ? .." "ಉಘೇ. ..ಆ ....ನಮ್ಮ ಅಪ್ಪ ನ್ ..ಮೇಲೆ ಏನಂದ್ರು ಬಿಡಕಿಲ್ಲ.. ನಿನ್.. ತಿಪ್ಪೆ..."ಎಂದ ತಿಂಕ. ಇನ್ನೊಂದ್ದು ಎಂಟರಿ ಭೂಡಿ ಬಸವಣ್ಣ. ಕೆದರಿದ ಉದ್ದನೆಯ ಕೂದಲು ..ಮನೆಯಾಗಿದ್ದ ಪೌಡರ್ ಎಲ್ಲ ಇವನೇ ಹಚ್ಚ್ಕೊಂಡ ಹಾಗಿತ್ತು ಆ ವೇಷ... ಭಲೇ ಆ ದೇವರ ಸೃಷ್ಟಿ ...ಗಂಡು ..ಹೆಣ್ಣಿನ ಸ್ವರೂಪದಲ್ಲಿ. ಹುಡುಗಿಯರು ಮಾಡೋ ಎಲ್ಲ ಶೋಕಿ ಬೇಕು ಮೂದೇವನಿಗೆ . ನಮ್ಮೂರಿನಲ್ಲಿ ನವರಾತ್ರಿಯ ವೇಷ ಇದೇ ರೀತಿ ಮನೆಮನೆಗೆ ಬರ್ತದೆ. ಅದೇ ತರಹ ಸಿಂಹ ವೇಷದ ತಲೆಯಲ್ಲಿ ಕಾಣುವ ಕೂದಲು ಇವನದ್ದು. ನಮ್ ಹೆಣ್ ಮಕ್ಳು ಇನ್ನೇನು ಕಮ್ಮಿ ಇಲ್ಲ..ಅವ್ರು ತಮ್ಮ ಉಟ್ಟ ಬಟ್ಟೆಯಲ್ಲೇ ರೆಡಿ ಆಗ್ಬಿಟ್ಟಿದ್ರು. ಒಬ್ಬಳು ಪಕ್ಕದ ಮನೆ ಲಚ್ಚಿಯ ಕೂದ್ಲು ಹಿಡ್ಕಂಡು ಜಗ್ಗಿದ್ದೆ... ಜಗ್ಗಿದ್ಧು.. ಕೂದಲೇನೋ ಸುಮರಾಗೆ ಇದ್ದದ್ರಿಂದ ಬಚಾವ್.ಎಲ್ಲ್ಯಾಂದ್ರೆ ಅಲ್ಲೇ ಮಂಡೆ ಬೋಳ್ ಆಗ್ತಿತಿತ್ತು. ಸಂಜೆ ಆಯ್ತು ಅಂದ್ರೆ ಎಲ್ಲ ಮನೆಯಲ್ಲೂ ಸೀರಿಯಲ್.. "ಮನೆಯೊಂದು ಮೂರು ಬಾಗಿಲು"..ದೊಡ್ಡ ಆವಾಜ್. ಮನೆಗೆ ಬೇರೆ ಯಾವುದೇ ಮೈಕಾ ಬೇಡ. ಎಂಥದ್ದು ಮಾರ್ರೆ ನಮ್ಮ್ ತಲೆ ಎಲ್ಲ ಹಾಳಗೊಗ್ತಿತ್ತು. ದಿನವೂ ಈ ರಾಮಾಯಣ..ಸೀರಿಯಲ್..ಕೊನೆಗೂ ನಮ್ಮ ಮನೆ ಟಿವಿ ಯನ್ನು ಅಟ್ಟಾಕೆ ಏರಿಸಿಯೇ ಬಿಟ್ಟೆವು. ಮಕ್ಳು ಅಂತೂ ಆ ಮರದಿಂದ ಈ ಮರಕೆ ಜಿಗಿಯುವ ಮರಿ ವಾನರರು. ವಠಾರ ಎಲ್ಲ ಸುತ್ತಿ ನುಂಗಿ ನೀರು ಕುಡಿಯುವ ಮಕ್ಕಳು. ಮನೆಯ ಗಾಜು ಏನಿದ್ದರೂ ಜೋಕೆ. ದೊಡ್ಡ ಫಿರಂಗಿಗಳನ್ನು ಎಸೆಯುವ ರೀತಿಯಲ್ಲಿ ಚಂಡೆಸೆತ. ಅಬ್ಬಾಬ್ಬ...ಸಾಕು ಸಾಕು ಮಾಡ್ತಿದ್ರು ಎಲ್ಲ ಮಂದಿಗೆ. ವಾರದಲ್ಲಿ ಬರಿ ಗಾಜು ರಿಪೇರಿಗೆ ದುಡ್ಡು ಸುರಿಬೇಕಿತ್ತು. ಬಾನುವಾರ ಬಿಡುವಿನ ಸಮಯ. ಎಲ್ಲ ಮನೇಲಿ ಹಾಜರ್. ಅಲ್ಲೇ ಪಕ್ಕದಲ್ಲಿ ಒಂದು ಆಲದ ಮರ.ಸುತ್ತಲೂ ಕಟ್ಟೆ ಕಟ್ಟಿದ್ರು. ನಮ್ಮ ವಠಾರದ ಹಿರಿಯ ಮಹಿಳಾ ಶಿಖಾಮಣಿಗಳು ಸುದ್ದಿ ಗೋಷ್ಠಿಗೆ ಹಾಜರ್. ಮಾತನಾಡುವ ವಿಷಯ ಬರಿ ಗುಸು ಗುಸು... ಪಿಸು ಪಿಸು ..ಸುದ್ದಿಗಳು. ಒಮ್ಮೆ ಎಲ್ಲ ಸೇರಿ ಅಲ್ಲೂ ಗಲಾಟೆ ಎಬ್ಬಿಸಿದರು ಪಕ್ಕದ ಮನೆ ಗಿರಿಜಾ ಆಂಟಿ ಬಗ್ಗೆ ಮಾತಾಡಿ.. ಅವ್ರು ಗಂಡ-ಹೆಂಡತಿ ಡಿವೋರ್ಸ್ ತನಕ ಅಡ್ಡಾಡಿದ್ರು..ಬೇಕಾ.. ವಠಾರ..ಗಲಾಟೆ ವಠಾರ. ರಚನೆ: ವಿ ಬೇಕಲ್ ( ಒಂದು ಸ್ಪರ್ಧೆಗೆ ರಚಿಸಿದ ಪ್ರಹಸನ ಲೇಖನ)
Comments