ಬಾಳಸಂಜೆ
- vibeebekal
- May 5, 2020
- 2 min read
ಶ್ರೀಕಂಠರಾಯರು ಕಾಫಿ ಕುಡಿದ ನಂತರ ಮನೆ ಹೊರಗಡೆ ಇರುವ ಚಾವಡಿಯಲ್ಲಿ ಬಂದು ಕುಳಿತರು. “ಮೂಕಜ್ಜಿಯ ಕನಸುಗಳು” ಪುಸ್ತಕವನ್ನು ಓದಲೆಂದು ಕುಳಿತಿದ್ದ ಅವರನ್ನು ಮನಸ್ಸು ಬೇರೊಂದು ಲೋಕಕ್ಕೆ ಕರೆದೊಯ್ದಿದಿತ್ತು . ಆ ವೇಳೆಗೆ ಸರಿಯಾಗಿ ಎದುರುಗಡೆ ಮನೆಯ ನಾಣಿ ತನ್ನ ಮಕ್ಕಳ ಜೊತೆಯಲ್ಲಿ ಎಲ್ಲೋ ಸುತ್ತಾಡಲು ಹೊರಟಿದ್ದರು. ಅವರು ರಾಯರ ಕಡೆ ನೋಡಿ ನಗೆಬೀರಿದರು. ಆ ನಗೆ ತನ್ನನ್ನು ಅಣಕಿಸುತಿದೆಯೇನೋ ಎಂಬ ಭಾವನೆ ರಾಯರಲ್ಲಿ ಮೂಡಿತು. ಇದರ ಜೊತೆಯಲ್ಲಿಯೇ ರಾಯರು ತನ್ನ ಮಕ್ಕಳೊಂದಿಗೆ ಕಳೆದ ಹಿಂದಿನ ಸಿಹಿನೆನಪುಗಳನ್ನು ಮನದಲ್ಲಿಯೇ ಮೆಲುಕು ಹಾಕತೊಡಗಿದರು. ಇದಕ್ಕೊಂದು ಬಲವಾದ ಕಾರಣವಿತ್ತು. ಇದೀಗ ರಾಯರು ತಮ್ಮ ಮಕ್ಕಳಿಂದ ದೂರಾಗಿದ್ದರು. ರಾಯರು ಒಬ್ಬ ಸ್ಕೂಲು ಮೇಷ್ಟ್ರಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಎರಡನೇ ಮಗನಿಗೆ ಜನ್ಮನೀಡುವ ಸಮಯದಲ್ಲಿಯೇ ಆವರ ಹೆಂಡತಿ ಶಾರದಮ್ಮ ಪರಲೋಕ ಸೇರಿದ್ದರು. ಆದ್ದರಿಂದ ಮಕ್ಕಳನ್ನು ನೋಡಿಕೊಳ್ಳುವ ಸಮಸ್ತ ಜವಾಬ್ಹಾರಿಯನ್ನು ರಾಯರೇ ವಹಿಸಬೇಕಾಯಿತು. ಮೊದಲ ಹೆಂಡತಿ ತೀರಿದಳೆಂದು ರಾಯರು ಎರಡನೆ ಮದುವೆಯೇನೂ ಆಗಲಿಲ್ಲ. ಎಲ್ಲಿ ಮಲತಾಯಿ ಆಗಮನದಿಂದ ತನ್ನ ಮಕ್ಕಳ ಜೀವನಗತಿ ಬದಲಾಗಬಹುದೇನೋ ಎಂದು ಆಲೋಚಿಸಿ ತಾನು ಮರು ಮದುವೆಯಾಗುವ ನಿರ್ಧಾರವನ್ನು ತಳ್ಳಿ ಹಾಕಿದ್ದರು. ತನ್ನ ಇದ್ದ ಸಂಪಾದನೆಯಲ್ಲಿಯೇ ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ಸ್ಥಾನಕ್ಕೇರಿಸಿದ್ದರು. ಅದೇ ರೀತಿ ಮಕ್ಕಳನ್ನು ಕೂಡ ಚೆನ್ನಾಗಿ ಅಕ್ಕರೆಯಿಂದ ಸಾಕಿ ಬೆಳೆಸಿದ್ದರು. ಉನ್ನತ ವಿದ್ಯಾಭ್ಯಾಸ ಮಾಡಿ ವಿದೇಶದಲ್ಲಿ ನೆಲೆಸಲು ಹೊರಟ ಮಕ್ಕಳನ್ನು ತಡೆಯಲು ರಾಯರಿಂದ ಸಾಧ್ಯವಾಗಲಿಲ್ಲ. ಒಂಟಿ ಜೀವದ ಅಗತ್ಯತೆಯನ್ನು ಅರಿಯದ ಮಕ್ಕಳೂ ತಮ್ಮ ತಂದೆಯನ್ನು ವೃದ್ಯಾಪ್ಯದಲ್ಲಿ ಹಾಗೇ ಬಿಟ್ಟು ಹೋಗಿದ್ದರು.ಅದೆಷ್ಟೋ ಕನಸುಗಳನ್ನು ಹೊತ್ತುಕೊಂಡು ಆ ಮುದಿ ಜೀವ ಬಾಳ ಮುಸ್ಸಂಜೆಯಲ್ಲಿ ನಿಂತಿತ್ತೋ ಏನೋ .......... ಆ ವಯಸ್ಸಿನಲ್ಲಿ ಆಶಿಸುತಿದ್ದ ಪ್ರೀತಿ, ನೆಮ್ಮದಿಯ ಬದುಕನ್ನು ರಾಯರಿಗೆ ನೀಡಲು, ತನ್ನ ರಕ್ತ ಹಂಚಿಕೊಂಡ ಮಕ್ಕಳು ಅಸಮರ್ಥರಾಗಿದ್ದರು. ಇದೇ ಯೋಚನೆಯಲ್ಲಿ ಕುಳಿತ ರಾಯರ ಕಣ್ಣಿನಿಂದ ನೀರ ಹನಿಯೊಂದು ಜಾರಿ ಬಿತ್ತು. ಅಸಹಾಯಕತೆಯನ್ನು ತೋರುತಿದ್ದ ಆ ಮುಖದಲ್ಲಿ ಗೆಲುವು ಇರಲಿಲ್ಲ. ಸಮಯ ಕಳೆದು ಹೋದುದರ ಪರಿವೇನೇ ಇಲ್ಲದೆ ಯೋಚನಾಮಗ್ನರಾಗಿದ್ದ ರಾಯರನ್ನು ನೀತಾ ಬಂದು ಎಚ್ಚರಿಸಿದಾಗಲೇ ಅವರು ಹಳೆ ನೆನಪಿನ ಗುಂಗಿನಿಂದ ಹೊರ ಬಂದದ್ಡು. ನೀತಾ- ರಾಯರ ನಡುವಿನ ಭಾಂದವ್ಯ ತೀರಾ ಗಾಢವಾಗಿತ್ತು. ರಾಯರು ನೀತಾಳಲ್ಲಿ ಬಹಳ ಪ್ರೀತಿ ತೋರಿಸುತಿದ್ದರು .ಅತಿಯಾದ ಅಕ್ಕರೆಯಿಂದ ನೋಡಿಕೊಳ್ಳುತಿದ್ದ ರಾಯರನ್ನು ತನ್ನ ತಂದೆಯಂತೆ ಕಾಣುತಿದ್ದಳು. ಬ್ಯಾಂಕ್ ಉದ್ಯೋಗಿಯಾಗಿದ್ದ ನೀತಾ ಚಿಕ್ಕಂದಿನಿಂದಲೇ ಬಹಳ ಕಷ್ಟದ ಜೀವನವನ್ನೇ ಕಂಡಿದ್ದಳು. ಆಕೆಗೆ ಸರಿಯಾದ ಮಾರ್ಗದರ್ಶನ, ಪ್ರೀತಿ ವಿಶ್ವಾಸ ವನ್ನು ನೀಡಿದ್ದರಿಂದ ಆಕೆಯ ಬಾಳು ಹಸನಾಗಲು ಸಾಧ್ಯವಾಯಿತು. ಶಿಕ್ಷಣದ ವೆಚ್ಹವನ್ನು ನೀಡಿ, ಆಕೆಗೆ ಒಂದು ಉದ್ಯೋಗವನ್ನು ದೊರಕಿಸಿಕೊಟ್ಟಿದ್ದರು. ಋಣ ಮುಕ್ತಳಾಗಬೇಕೆಂಬ ಹಂಬಲದಲ್ಲಿದ್ದ ಆಕೆಗೆ ರಾಯರ ಚಾಕರಿ ಮಾಡುವ ಅವಕಾಶ ಸಿಕ್ಕಿತು. ಒಳಬಂದ ನೀತಾ ರಾಯರ ಬಾಡಿದ ಮುಖ ನೋಡಿ ತಕ್ಷಣ," ಅಪ್ಪಾಜಿ ಏನಾಯ್ತು ? ಏನೋ ಬೇಜಾರು ಮಾಡ್ಕೊಂಡ ಹಾಗಿದೆ......" ಎಂದು ಆತಂಕದಿಂದ ಕೇಳಿದಳು. ರಾಯರು ತಮ್ಮ ದುಃಖವನ್ನು ಅದುಮಿಡುತ್ತಾ," ಏನಿಲ್ಲ ಮಗಳೇ....ನೀ ಹೇಗಿದ್ದಿ ? ಸೌಖ್ಯನಾ ?" ಎಂದು ನಗುತ್ತಾ ಪ್ರಶ್ನಿಸಿದರು. ನೀತಾ, "ಆದಿರಲಿ ...ನಾನು ಆರೋಗ್ಯ .ಈಗ ನೀವು ಪ್ರಸ್ತುತ ಇದೇ ಲೋಕದಲ್ಲಿದ್ದಿರಿ ತಾನೆ"? ಎಂದು ಕಣ್ಣು ಮಿಟುಕಿಸುತ್ತಾ ಕೇಳಿದಳು. "ಅಪ್ಪಾಜಿ, ನಾನು ನಿಮಗೆ ಸರ್ಪ್ರೈಸ್ ಕೊಡಬೇಕೆಂದು ಈಗ ಇಲ್ಲಿಗೆ ಬಂದಿದ್ದು. ನಾನು ಮಂಗಳೂರಿಗೆ ವರ್ಗ ಮಾಡಿಸಿಕೊಂಡಿರುತ್ತೇನೆ" ಎಂದು ನೀತಾ ಅಂದಳು. ಮರುಕ್ಷಣದಲ್ಲಿಯೇ ರಾಯರ ಮುಖ ಬಾಡಿ ಹೋದಂತಾಯಿತು. ರಾಯರು, “ಮಗಳೇ ಹಾಗಾದರೆ ನನ್ನನು ಬಿಟ್ಟು ಹೋಗುತಿದ್ದಿಯ…., ಅದೇನು ನಿನಗೆ ಈ ಊರು ಹಿಡಿಸುತಿಲ್ಲವೇನು ?? ”ಎಂದು ದುಃಖ ಮಿಶ್ರಿತ ಧ್ವನಿಯಿಂದ ಕೇಳಿದರು. ರಾಯರಿಗೆ ಈ ಸುದ್ದಿ ಅನಿರೀಕ್ಷಿತವಾಗಿತ್ತು. ತನ್ನ ಮನದಾಳದ ನೋವು ಸಂಕಟವನ್ನು ಆಗಾಗ್ಗೆ ಹಂಚಿಕೊಳ್ಳುತಿದ್ದ ಸುನೀತಾಳನ್ನು ಕಳೆದುಕೊಳ್ಳುತಿದ್ದೇನೋ ಅಂದುಕೊಂಡು ಹೃದಯ ಹಿಂಡಿದಂತಾಯಿತು. ಪ್ರೀತಿಗೋಸ್ಕರ ತುಡಿಯುತ್ತಿದ್ದ ಆ ಜೀವ, ನೀತಾಳ ಮಾತನ್ನು ಕೇಳಿ ಬಹಳಷ್ಟು ನೊಂದಿತು. ನೀತಾ ಸಂಕೋಚಪಡುತ್ತಾ , " ಅಪ್ಪಾಜಿ, ನೀವೋಬ್ಬರೇ ಇಲ್ಲಿ ಏನ್ ಮಾಡ್ತೀರಿ ?....ನೀವು ಅನುಮತಿ ಸೂಚಿಸಿದರೆ ನಾನು ......ನಿಮ್ಮನು ನನ್ಜೊತೆ ಕರ್ಕೊಂಡ್ ಹೋಗಲು ತಯಾರು ".....ಎಂದಳು . ಆ ಕ್ಷಣಕ್ಕೆ ರಾಯರ ಕಣ್ಣುಗಳು ಹರ್ಷದಿಂದ ಹೊಳೆಯಿತು. ಕಣ್ಣಿಂದ ಆನಂದಬಾಷ್ಪ ಹರಿದು ಬಂತು. ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು.
Commentaires