"ಮಾಡಿದವನ ಪಾಪ, ಆಡಿದವನ ಬಾಯಲ್ಲಿ"
- vibeebekal
- May 6, 2020
- 2 min read
ದೂರದ ಜಂಬೂದ್ವೀಪದಲ್ಲಿ ಒಬ್ಬ ರಾಜನಿದ್ದ. ಅವನು ದೈವಭಕ್ತನು, ಧರ್ಮದಯಾಳು, ಪರೋಪಕರಿಯಾಗಿದ್ದ. ದಾನ ಧರ್ಮ ನೀಡುವುದರಲ್ಲಿ ಆತನದು ಎತ್ತಿದ ಕೈ. ಒಂದು ದಿನ ಆತ ತನ್ನ ಊರಿನ ಜನರಿಗೆ ಔತಣ ಕೂಟವನ್ನು ಏರ್ಪಡಿಸಿದನು. ಊರಿನ ಜನರೆಲ್ಲರಿಗೂ ಮೃಷ್ಟಾನ್ನ ಭೋಜನವನ್ನು, ತನ್ನ ಮನೆಯ ಅಂಗಳದಲ್ಲಿ ಭಟರನ್ನು ಕರೆಯಿಸಿ ಬಡಿಸುತ್ತಿರುವಾಗ ,ಆಕಾಶದಲ್ಲೊಂದು ಗಿಡುಗ ಹಾವೊಂದನು ಕಚ್ಚಿ ಕೊಂಡೊಯ್ಯುತ್ತಲಿತ್ತು.. ರಕ್ತದ ಹನಿಯೊಂದು ಬಡಿಸುವ ಪಾತ್ರೆಗೆ ಬಿದ್ದು ಅದು ವಿಷ ಪ್ರಾಶನವಾಯಿತು. ಆ ಹೊತ್ತಿಗಾಗಲೇ ಜನರ ಊಟ ಮುಗಿಯಿತು. ಬಹಳಷ್ಟು ಜನರು ವಿಷಾಹರ ಸೇವಿಸಿ ಅಲ್ಲೇ ಸಾವನ್ನಪಿದರು. ಈಗ ಊರಿನಲ್ಲೆಲ್ಲಾ ಬರೀ ರಾಜನ ಬಗ್ಗೆ ಜನ ಮಾತನಾಡಲಾರಂಭಿಸಿದರು. ಪಾಪಿ ರಾಜನಿಂದಾಗಿ ಊರ ಜನರ ಮರಣ ಸಂಭವಿಸಿತು. ಆತನು ತಿಳಿದು ತಿಳಿದು ಜನರೆಲ್ಲರಿಗೂ ಉಣ ಬಡಿಸಿದನೆಂಬ ಸುದ್ದಿ ಇಡೀ ರಾಜ್ಯದಲ್ಲಿ ವ್ಯಾಪ್ತಿಯಾಯಿತು. ಇತ್ತ ಯಮಲೋಕದಲ್ಲಿ ಚಿತ್ರಗುಪ್ತ ಹಾಗೂ ಯಮಧರ್ಮರಾಯರು ಪಾಪದ ಕುರಿತಾಗಿ ವಿಚಾರ ಮಾಡುತ್ತಿದ್ದರು. ಈ ಪಾಪ ಯಾರಿಂದಾಗಿ ನಡೆಯಿತು? ಈ ಪಾಪದ ಹಂಚಿಕೆಯನ್ನು ಹೇಗೆ ಮಾಡುವುದೆಂದು???ಯಾರನ್ನು ಶಿಕ್ಷೆಗೆ ಗುರಿಮಾಡುವುದೆಂದು? ಮೊದಲನೇಯದಾಗಿ ರಾಜನ ತಪ್ಪು ಕೊಂಚವೂ ಇಲ್ಲ, ಆತನು ತನ್ನ ಮನಸಾರೆ ಜನರನ್ನು ಸಂತುಷ್ಟಗೊಳಿಸುವ ಸಲುವಾಗಿ ಎಲ್ಲರಿಗೂ ಊಟವನ್ನು ನೀಡಿದ್ದನು. ಎರಡನೇಯದಾಗಿ ಗಿಡುಗ, ತನ್ನ ಬೇಟೆಯನ್ನು ಅದರ ಪಾಡಿಗೆ ಹಿಡಿದು ಕಚ್ಚಿಕೊಂಡು ಆಕಾಶದಲ್ಲಿ ಸಾಗುತ್ತಲಿತ್ತು. ಮೂರನೇಯದಾಗಿ ಉಣ ಬಡಿಸಿದ ಭಟರು ತಮ್ಮ ಕೈಯಲ್ಲಿ ಖಂಡಿತವಾಗಿಯೂ ವಿಷವನ್ನು ಆಹಾರಕ್ಕೆ ಸೇರಿಸಿರರಿಲ್ಲ. ಚಿತ್ರಗುಪ್ತನೆಂದ,"ತಡಿ, ಸ್ವಲ್ಪ ದಿನ ತಾಳು. ಮುಂದೆ ನೋಡೋಣವೆಂದು". ದಿನ ಹೀಗೆ ಸಾಗುತ್ತಲಿತ್ತು. ಒಮ್ಮೆ ದಾರಿಹೋಕನ್ನೊಬ್ಬ ರಾಜನನ್ನು ಭೇಟಿಯಾಗಲು ಹೊರಟಿದ್ದ. ಅಲ್ಲೇ ಪಕ್ಕದಲ್ಲಿದ್ದ ಹೂಮಾರುವವಳನ್ನು ಅರಮನೆಯ ದಾರಿ ಪ್ರಶ್ನಿಸಿದನು. ಹೂಮಾರುವವಳು ಆಗ ," ಯಜಮಾನರೇ, "ಎಚ್ಚರಿಕೆ".. ರಾಜ ಸ್ವಲ್ಪನೂ ಒಳ್ಳೆಯವನಲ್ಲ.. ಬಹಳ ನೀಚ..ರಾಜ..ಜನರಿಗೆ ವಿಷಪ್ರಾಶನ ಮಾಡಿ ಕೊಲ್ಲುತ್ತಾನೆ....ಜಾಗ್ರತೆ.." ಎಂದು ಹೇಳುತ್ತಾಳೆ. ಇದನ್ನು ಕೇಳಿ ದಾರಿಹೋಕ ತನ್ನ ಪ್ರಯಾಣವನ್ನು ಮುಂದುವರಿಸಿದನು. ಚಿತ್ರಗುಪ್ತನೀಗ ಎಚ್ಚೆತ್ತನು. ಈಗ ಪಾಪದ ಹಂಚಿಕೆಯನ್ನು ಮಾಡುವ ಸಮಯ ಬಂದಿದೆ. "ಸಂಪೂರ್ಣವಾಗಿ ಹೂಮಾರುವವಳ ತಲೆಗೆ ಕಟ್ಟಿ. ಈ ಪಾಪದ ಜವಾಬ್ದಾರಿಯನ್ನು ಈಕೆಯೇ ಹೊರಬೇಕು" ಎಂದು ತಮ್ಮ ಸಂಗಡಿಗರಿಗೆ ಆಜ್ಞಾಪಿಸಿದನು. ಕಾರಣವೇನೆದರೆ ಸಂಪೂರ್ಣವಾದ ಸತ್ಯ ತಿಳಿಯದೆ ತನ್ನ ನಾಲಿಗೆಯಲ್ಲಿ ಆ ರಾಜನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಳು. ಸ್ನೇಹಿತರೆ, ಈ ಕಥೆಯಿಂದ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬಹಳಷ್ಟಿದೆ. ಯಮಧರ್ಮರಾಯರು ಹಾಗೂ ಆತನ ಸಂಗಡಿಗರು ಈ ವಿಚಾರವಾಗಿ ಒಂದು ತೀರ್ಮಾನವನ್ನು ಮಾಡಲು ಹೆಣಗಾಡುತ್ತಿರುವಾಗ, ಹೂ ಮಾರುವವಳು ತನ್ನ ಬಾಯನ್ನು ಏತಕ್ಕೋಸ್ಕರ ಹೊಲಸು ಮಾಡಬೇಕಿತ್ತು?? "ಮಾಡಿದವನ ಪಾಪ, ಆಡಿದವನ ಬಾಯಲ್ಲಿ"ಎಂಬ ಗಾದೆಮಾತಿನಂತೆ, ಯಾವುದೇ ವಿಚಾರ ಯಾ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಪೂರ್ವಪೀಡಿತ ನಿಲುವು ತಾಳಿ ನಿರ್ಣಯವನ್ನು ಕೊಡಬೇಡಿ.ಪಾಪ ಮಾಡಿದ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಬಹಳ ಪ್ರಜ್ಞಾಹೀನರಾಗಿ ಓಡಾಡುತ್ತಿರುತ್ತಾರೆ. ಆದರೆ ಮೂರನೆಯ ವ್ಯಕ್ತಿಯು ಮಾತ್ರ ಈ ಬಗ್ಗೆ ವಿವೇಚನೆ ಮಾಡುತ್ತಾ, ತನಗೆ ತಿಳಿದೋ ತಿಳಿಯದೆಯೋ, ಸುದ್ದಿಗಳನ್ನು ಇನ್ನೂ ನಾಲ್ಕು ಜನರಿಗೆ ಹಬ್ಬಿಸಿ ಗಾಸಿಪ್ ಮಾಡುತ್ತಿರುತ್ತಾರೆ. ಹೀಗಾಗಿ ಸಂದರ್ಭ, ಸನ್ನಿವೇಶದ ಪೂರ್ಣ ಅವಲೋಕನ ಮಾಡಲು ನಾವು ಯಾರು ಅಲ್ಲ,ಅದು ನಮಗೆ ತಿಳಿದಿಲ್ಲ ಎನ್ನುವಂತೆ ಇರಿ. ಇಲ್ಲವಾದರೆ ಪಾಪದ ಕೊಡ ತುಂಬಿಸಿಕೊಳ್ಳಿ. ಚಿತ್ರಗುಪ್ತ ಕೊನೆಗೆ ಎಷ್ಟೊಂದು ಪಾಪದ ಫಲವನ್ನು ನಮ್ಮ ತಲೆಗೆ ಕಟ್ಟಬಹುದೋ ಏನೋ!!. ಈ ಸಣ್ಣ ಕಥೆಯನ್ನು ಒಮ್ಮೆ ನನ್ನ ಅತ್ತೆ ನನ್ನ ಬಳಿ ಹೇಳಿದ್ದರು. ಕೇಳಿದಾಗಿನ್ನಿಂದಲ್ಲೂ ಮಾತನಾಡುವಾಗ ಬಹಳಷ್ಟು ನಿಗವಾಹಿಸುತ್ತಿದ್ದೇನೆ. ಸಾಧ್ಯವಾದರೆ ನೀವು ಈ ಕತೆಯನ್ನು ನಿಮ್ಮವರೊಂದಿಗೆ ಹಂಚಿಕೊಳ್ಳಿ. ರಚನೆ: ವಿ ಬೇಕಲ್
Comments