ಸುಂದರ ಪ್ರವಾಸೀ ತಾಣ ಬೇಕಲಕೋಟೆ
- vibeebekal
- May 5, 2020
- 2 min read
ಒಂದು ಕಡೆ ಸಮುದ್ರತೀರ, ಮತ್ತೊಂದೆಡೆ ಸಾಲು ಸಾಲು ತೆಂಗಿನಮರಗಳನ್ನೊಳಗೊಂಡ ಆ ಸುಂದರ ಪ್ರಕೃತಿ ಸೌಂದರ್ಯ. ಸಮುದ್ರರಾಜನಿಗೆ ಸರಿಸಾಟಿಯಾಗಿ ನಿಂತಿರುವ ಬತ್ತೇರಿ. ಈ ಚಿತ್ರಣಗಳನ್ನೊಳಗೊಂಡ ಪ್ರದೇಶವು ಯಾವುದೇ ಪ್ರವಾಸಿಗರ ಕಣ್ಮನ ಸೆಳೆಯುವಂತದ್ದು. ಇಂತಹ ನಿಸರ್ಗ ಸಂಪತ್ತುಗಳ ನಡುವೆ, ಸಮುದ್ರ ತೀರದಲ್ಲಿ ನಿರ್ಭಯವಾಗಿ ನಿಂತಿರುವ ಈ ಬೇಕಲಕೋಟೆ ಒಂದು ಸುಂದರ ಇತಿಹಾಸಿಕ ಸ್ಮಾರಕ ಹಾಗೂ ಉತ್ತಮ ಪ್ರವಾಸಿ ತಾಣವಾಗಿದೆ . ಬೆಂಗಳೂರಿಂದ ಸುಮಾರು 400 ಕಿ.ಮೀ ಅಂತರದಲ್ಲಿರುವ ಈ ಪ್ರವಾಸಿ ತಾಣ ವೃತ್ತಾಕಾರದಲ್ಲಿ ಸುಮಾರು 40 ಎಕ್ರೆ ವಿಸ್ತೀರ್ಣದಲ್ಲಿ ವಿಶಾಲವಾಗಿ ನಿಂತoತೆ ಕಾಣಿಸುತ್ತದೆ. ಕಾಸರಗೋಡು ಜಿಲ್ಲೆಯ ಪುರಾತನ ಕೋಟೆಗಳಲ್ಲಿ, ಅನೇಕ ಕೋಟೆಗಳು ಅವಶೇಷಗಳಾಗಿದ್ದರೂ, ಬೇಕಲಕೋಟೆಯು ಇಂದಿಗೂ ಸುರಕ್ಷಿತವಾಗಿ ಉಳಿದು ನಿಂತಿದೆ. 16ನೇ ಶತಮಾನದಲ್ಲಿ ಬಹಳ ಪ್ರಬಾವಶಾಲಿಯಾಗಿ ಆಳ್ವಿಕೆ ನಡೆಸುತ್ತಿದ್ದ ಬಿದನೂರಿನ ಇಕ್ಕೇರಿ ಅರಸನಾದ ಶಿವಪ್ಪನಾಯಕನು ಮಲಬಾರು ಪ್ರಾಂತ್ಯವನ್ನು ಆಳುತಿದ್ದ ಸಂದರ್ಭದಲ್ಲಿ ಈ ಕೋಟೆಯನ್ನು ನಿರ್ಮಿಸಿದನೆಂದು ಅನೇಕ ಮಾಹಿತಿಗಳು ತಿಳಿಸುತ್ತದೆ. ನಂತರದ ದಿನಗಳಲ್ಲಿ ಟಿಪ್ಪು ಸುಲ್ತಾನನ ಆಳ್ವಿಕೆಯೂ ಈ ಕೋಟೆಯಲ್ಲಿ ನಡೆದಿದೆ . ಈ ಬೇಕಲಕೋಟೆಯು ನ್ಯಾಯತೀರ್ಮಾನ ನಡೆಸುವ ಕೇಂದ್ರವಾಗಿ ಮೆರೆಯುತ್ತಿತ್ತು . ಈಗ ಕೋಟೆಯಿರುವ ಈ ಪ್ರದೇಶವು ಮೊದಲು ಗುಡ್ಡವಾದುದರಿಂದ, ಅದನ್ನು ಅಗೆದು ಅಲ್ಲೇ ದೊರೆತ ಬೆಂಗಲ್ಲು ಮತ್ತು ಬಂಡೆಕಲ್ಲುಗಳ ಸಹಾಯದಿಂದ ಈ ಕೋಟೆಯನ್ನು ನಿರ್ಮಿಸಲಾಗಿದೆ. ಬೇಕಲಕೋಟೆಯು ಇಲ್ಲಿಯ ತನಕ ತಲೆಯೆತ್ತಿ ನಿಲ್ಲಲು ಈಗಿನ ಬಿರ್ಲಾ, ಎಸಿಸಿ ಸಿಮೆಂಟುಗಳು ಕಾರಣವಲ್ಲ!!! ಬದಲಾಗಿ ಬೆಲ್ಲ ಮತ್ತು ಸುಣ್ಣದ ಮಿಶ್ರಣದಿಂದ ನೀಡುತಿದ್ದ ಲೇಪವು ಕೋಟೆಯ ಸುರಕ್ಷೆಗೆ ಕಾರಣವಾಗಿದೆ. ಬೇಕಲಕೋಟೆಯಲ್ಲಿ ಗಮನ ಸೆಳೆಯುವ ಅಂಶವೇನೆಂದರೆ ಮುಖ್ಯವಾಗಿ ಅಲ್ಲಿರುವ ಬತ್ತೇರಿ, ಬುರುಜುಗಳು . ಕೋಟೆಗಳ ಮೇಲೆ ಅಷ್ತಪಟ್ಟಿಯಾಕಾರದಲ್ಲಿರುವ ಈ ಬತ್ತೇರಿ ಬುರುಜುಗಳನ್ನೇರಲು ಒಂದೆರಡು ಮೆಟ್ಟಿಲುಗಳ ರಚನೆಯಿದೆ. ಆಗಿನ ಸೈನಿಕರು ಈ ಬತ್ತೇರಿ ಬುರುಜುಗಳ ಮೇಲೇರಿ ಕೋಟೆಯನ್ನು ಕಟ್ಟೆಚ್ಚರದಿಂದ ಕಾಯುತಿದ್ದರು. ಈ ಕೋಟೆಯಲ್ಲಿರುವ ಫಿರಂಗಿ ಕಿಂಡಿಗಳು ಬೇಕಲಕೋಟೆಯನ್ನು ಆಳಿದ ರಾಜಸೈನಿಕರ ಶೌರ್ಯವನ್ನು ಇಂದಿಗೂ ಸಾರಿ ಹೇಳುತ್ತದೆ. ಈ ಫಿರಂಗಿದ್ವಾರಗಳ ಮೂಲಕ ಶತ್ರುಗಳ ಕಡೆಗೆ ಕೋವಿಯ ಗುರಿಯಿಟ್ಟು ಗುಂಡು ಹೊಡೆಯುತ್ತಿದ್ದರು. ಈ ಕೋಟೆಯಲ್ಲಿ ಒಂದು ಮದ್ದು ತುಂಬಿಸುವ ಕೊಠಡಿಯಿದೆ .ಅದು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಜಾಗರುಕತೆಯ ದೃಷ್ಟಿಯಿಂದಾಗಿ ಈ ಕೊಠಡಿಯ ಮೇಲ್ಚಾವಣಿಯನ್ನು ಕಲ್ಲಿನಿಂದಲೇ ಕಟ್ಟಲಾಗಿದೆ. ಮರದ ಉಪಯೋಗವನ್ನೇ ಮಾಡದೆ ಇದನ್ನು ಕಟ್ಟಿರುವುದು ಒಂದು ಆಶ್ಚರ್ಯಕರ ಸಂಗತಿಯೇ ಹೌದು. ಇದು ನಮ್ಮ ಪೂರ್ವಜರ ರಚನಾ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ. ಆಪತ್ತಿನ ಸಮಯದಲ್ಲಿ ಪಾರಾಗಲು ಕೋಟೆಯಲ್ಲಿ ಗುಪ್ತ ದ್ವಾರವಿತ್ತು. ಇದರ ಮೂಲಕ ಹಾದು ಹೋದರೆ ನೇರವಾಗಿ ಸಮುದ್ರ ತೀರವನ್ನು ಸೇರಬಹುದು. ಈ ಸುರಂಗದೊಳಗೆ ಸಂಪೂರ್ಣ ಕತ್ತಲೆಯಂತೆ !!!! ಇತ್ತೀಚಿನ ದಿನಗಳಲ್ಲಿ ಕಡಲ್ಕೊರೆತದಿಂದಾಗಿ ಈ ಸುರಂಗಗಳು ಬಿರುಕು ಬಿಟ್ಟಿವೆ.ಅದನ್ನು ಪುರಾತತ್ವ ಇಲಾಖೆಯವರು ಆಸಕ್ತಿವಹಿಸಿ ದುರಸ್ತಿಗೊಳಿಸಬೇಕಾಗಿದೆ. ಕೋಟೆಯ ಒಳ್ಳಾಂಗಣದಲ್ಲಿ ಕೆರೆ ಬಾವಿಗಳಿದ್ದವೆಂಬ ಕುರುಹುಗಳು ಸಿಕ್ಕಿವೆ ." ಕುದುರೆ ಕೆರೆ"ಗಳೆಂದು ಪ್ರಸಿದ್ದಿ ಹೊಂದಿದ್ದ ಕೆರೆಗಳು, ಕುದುರೆಲಾಯಗಳು, ಕೆರೆಬಾವಿಗಳು ಈಗ ಕೇವಲ ಅವಶೇಷಗಳಾಗಿವೆ. ಇಕ್ಕೇರಿ ಅರಸರು ನೀಡಿದ ಕೊಡುಗೆಯಾದ ಬೇಕಲಕೋಟೆಯು ಇಂದಿಗೂ ಭವ್ಯ ಸ್ಮಾರಕವಾಗಿ ನಿಂತಿರುವುದು ಒಂದು ಸಂತೋಷದ ವಿಚಾರ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕೋಟೆಯು ಕಿಡಿಗೇಡಿಗಳಿಂದಾಗಿ ಹಾಳಾಗುತ್ತಿದೆ. ಪ್ರಸ್ತುತ ಪ್ರವಾಸೋಧ್ಯಮ ಕೇಂದ್ರದ ಅಧೀನದಲ್ಲಿರುವ ಬೇಕಲಕೋಟೆಯನ್ನು ಜೀರ್ಣೋದ್ದಾರಗೊಳಿಸುವ ಹಿನ್ನಲೆಯಲ್ಲಿ ಬದಲಾಯಿಸಿದರೆ ಅದರ ನೈಜ ಸೊಗಡು ಬದಲಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಕೋಟೆ ಪ್ರವಾಸೋದ್ಯಮ ತಾಣದ ಜೊತೆಗೆ ಐತಿಹಾಸಿಕ ಸ್ಮಾರಕವಾಗಿಯೇ ಉಳಿಯಲಿ ಎಂದು ನನ್ನ ಆಶಯ.ಸುಂದರ ಪರಿಸರದ ಮಡಿಲಲ್ಲಿರುವ ಈ ಪ್ರವಾಸಿ ತಾಣಕ್ಕೆ ನೀವೆಲ್ಲ ಒಮ್ಮೆ ಭೇಟಿ ನೀಡಿ.
Comments